ಕೈಗಾರಿಕೆ

ಕೈಗಾರಿಕೆ ಶಬ್ದದ ಸಮರ್ಪಕವಾದ ವ್ಯಾಖ್ಯೆ ನೀಡುವುದು ಕಷ್ಟ. ಉತ್ಪಾದನಕಾರ್ಯದಲ್ಲಿ ನಿರತವಾದ ಪರಸ್ಪರ ಸ್ಪರ್ಧಾನಿರತವಾದ ಹಲವು ಉದ್ಯಮಸಂಸ್ಥೆಗಳ ಗುಂಪನ್ನು ಕೈಗಾರಿಕೆ ಎಂದು ಕರೆಯಲಾಗುತ್ತದೆ. ಈ ಗುಂಪಿನಲ್ಲಿರುವ ಒಂದೊಂದು ಉದ್ಯಮ ಸಂಸ್ಥೆಯನ್ನೂ ಘಟಕವನ್ನೂ ಕೈಗಾರಿಕೆಯೆಂದು ಕರೆಯುವ ವಾಡಿಕೆಯೂ ಇದೆ. ಕೈಗಾರಿಕೆಯನ್ನು ಉತ್ಪಾದನ ವ್ಯವಸ್ಥೆಯ ಒಂದು ಘಟಕ ಎಂದು ಭಾವಿಸಿದ್ದೇ ಆದರೆ ಅದು ಯಾವುದಾದರೂ ಒಂದು ವಸ್ತುವನ್ನು ಉತ್ಪಾದಿಸುವುದರಲ್ಲಿ ನಿರತವಾಗಿರುವ ಎಲ್ಲ ಉದ್ಯಮಸಂಸ್ಥೆಗಳ ಸಮೂಹವನ್ನು ಪ್ರತಿನಿಧಿಸುತ್ತದೆ. ಉದಾಹರಣೆಗೆ, ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಹಿಂದೂಸ್ತಾನ್ ಉಕ್ಕಿನ ಸಂಸ್ಥೆ ಮುಂತಾದವುಗಳಲ್ಲಿ ಒಂದೊಂದೂ ಉದ್ಯಮಸಂಸ್ಥೆ. ಪ್ರತಿ ಉದ್ಯಮಸಂಸ್ಥೆಯೂ ಒಂದೇ ಬಗೆಯ ವಸ್ತುವನ್ನು ತಯಾರಿಸುತ್ತದೆ. ಆದರೆ ಉತ್ಪಾದನೆ, ವಿಕ್ರಯ, ಬೆಲೆಯ ನಿಗದಿ ಮೊದಲಾದ ವಿಷಯಗಳಲ್ಲಿ ಪ್ರತಿಯೊಂದೂ ಸ್ವತಂತ್ರ ಧೋರಣೆ ಅನುಸರಿಸುತ್ತದೆ. ಪ್ರತಿಯೊಂದು ಉದ್ಯಮಸಂಸ್ಥೆಯೂ ಒಂದೊಂದು ಮಾಲೀಕತ್ವಕ್ಕೆ ಒಳಪಟ್ಟಿರುತ್ತದೆ. ಈ ಎಲ್ಲ ಉದ್ಯಮಸಂಸ್ಥೆಗಳನ್ನೂ ಒಟ್ಟಾರೆ ತೆಗೆದುಕೊಂಡ ಪಕ್ಷದಲ್ಲಿ ಇವು ಭಾರತದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಎನಿಸಿಕೊಳ್ಳುತ್ತವೆ. ಆದರೆ ಏಕಸ್ವಾಮ್ಯ ಪರಿಸ್ಥಿತಿಯಲ್ಲಿ ಅಥವಾ ರಾಷ್ಟ್ರೀಕರಣಗೊಂಡ ಕೈಗಾರಿಕೆಯಲ್ಲಿ ಒಂದೇ ಉದ್ಯಮ ಸಂಸ್ಥೆಯಿರುವುದುಂಟು. ಒಂದೊಂದು ಉದ್ಯಮ ಸಂಸ್ಥೆಯೂ ಬೇರೆ ಬೇರೆ ಕೈಗಾರಿಕೆಗಳಿಗೆ ಸಂಬಂಧಿಸಿದ ಹಲವಾರು ಉತ್ಪನ್ನಗಳನ್ನು ತಯಾರಿಸುವುದೂ ಉಂಟು. ಉತ್ಪಾದನ ವ್ಯವಸ್ಥೆಯಲ್ಲಿ ಒಂದೊಂದು ಪದಾರ್ಥವನ್ನು ತಯಾರಿಸುವ ಒಂದೊಂದು ಶಾಖೆಯನ್ನೂ ಒಂದೊಂದು ಕೈಗಾರಿಕೆಯೆಂದು ಪರಿಗಣಿಸುವುದು ಯಾವಾಗಲೂ ಸಮರ್ಪಕವೆನಿಸದು. ಅನೇಕ ವೇಳೆ ಒಂದು ಕೈಗಾರಿಕೆಯೂ ಇನ್ನೊಂದು ಕೈಗಾರಿಕೆಯೂ ಪರಸ್ಪರ ವ್ಯಾಪಿಸಿರುವುದುಂಟು. ಉದಾ: ಹಡಗು ನಿರ್ಮಾಣ.

ಪದಾರ್ಥದ ರೂಪವನ್ನು ಅಥವಾ ಗುಣವನ್ನು ಪರಿವರ್ತಿಸಿ ಅದಕ್ಕೆ ಉಪಯುಕ್ತತೆಯನ್ನು ದೊರಕಿಸಿಕೊಡುವ ಎಲ್ಲ ಕಾರ್ಯಗಳನ್ನೂ ಕೈಗಾರಿಕೆಯೆಂದು ಪರಿಗಣಿಸುವುದುಂಟು. ಇದರಲ್ಲೂ ನಾನಾ ವಿಧಗಳುಂಟು. ನಿಸರ್ಗದಲ್ಲಿ ದೊರಕುವ ಸಾಧನಗಳನ್ನು ತೆಗೆಯುವ, ಅವುಗಳ ಸ್ವರೂಪದಲ್ಲಿ ಪರಿವರ್ತನೆ ಮಾಡುವ ಚಟುವಟಿಕೆಗಳನ್ನು ಪ್ರಾಥಮಿಕ ಕೈಗಾರಿಕೆ ಎನ್ನುತ್ತಾರೆ. ಗಣಿಗಾರಿಕೆ, ಅರಣ್ಯವಸ್ತು ಉತ್ಪಾದನೆ ಇವು ಉದಾಹರಣೆಗಳು. ನಿಸರ್ಗದ ಸಹಕಾರದೊಡನೆ ಮಾನವನ ಶ್ರಮವನ್ನು ಮಿತಗೊಳಿಸಿ ಪದಾರ್ಥ ಉತ್ಪಾದಿಸುವ ಕೃಷಿ, ಪಶುಪಾಲನೆ ಇವನ್ನೂ ಸ್ಥೂಲವಾಗಿ ಪ್ರಾಥಮಿಕ ಕೈಗಾರಿಕೆಗಳ ಗುಂಪಿನಲ್ಲೇ ಸೇರಿಸುವುದುಂಟು. ಪ್ರಾಥಮಿಕ ಕೈಗಾರಿಕೆಗಳು ಇತರ ಕೈಗಾರಿಕೆಗಳಿಗೆ ಅಸ್ತಿಭಾರಪ್ರಾಯವಾದವು ಗಣಿ, ಕೃಷಿ ಇವುಗಳಿಂದ ಬಂದ ಸಾಮಗ್ರಿಗಳನ್ನು ವಿವಿಧ ರೀತಿ ಸಂಸ್ಕರಿಸಿ ಮಾರ್ಪಡಿಸುವ ಕಾರ್ಯಗಳು ಎರಡನೆಯ ಹಂತ. ಇವು ದ್ವಿತೀಯಕ ಕೈಗಾರಿಕೆಗಳು. ಅವನ್ನು ತಯಾರಿಕಾ 

ಕೈಗಾರಿಕೆಗಳೆನ್ನುತ್ತಾರೆ. ಸಕ್ಕರೆ, ಪಾತ್ರೆ, ಜವಳಿ ಮುಂತಾದವು ಉದಾಹರಣೆಗಳು. ಯಂತ್ರ, ಮೋಟಾರು ಮುಂತಾದವು ಹಲವು ವಸ್ತುಗಳ ಜೋಡಣೆಗಳಾಗಿರುವುದುಂಟು. ಇವು ಯಂತ್ರಗಳ ನಿರ್ಮಾಣಕಾರ್ಯದಲ್ಲಿ ತೊಡಗಿದ ಕೈಗಾರಿಕೆಗಳು. ಇವುಗಳದು ಮೂರನೆಯ ಹಂತ. ಅರಣ್ಯೋತ್ಪಾದನೆ, ಕೃಷಿ, ಪಶುಪಾಲನೆ, ಮತ್ಸ್ಯೋದ್ಯಮ ಇವನ್ನು ಬಿಟ್ಟು ಮಿಕ್ಕವನ್ನು ಕೈಗಾರಿಕೆಗಳೆಂದು ಸಾಮಾನ್ಯವಾಗಿ ಕರೆಯುತ್ತಾರೆ.

ಮೇಲೆ ಹೇಳಿದ ಅರ್ಥದಲ್ಲಿ ಕೈಗಾರಿಕೆಯನ್ನು ಮಾನವನ ಆರ್ಥಿಕಜೀವನ ವಿಕಾಸದ ಕೊನೆಯ ಹಂತವೆಂದು ಪರಿಗಣಿಸಬಹುದಾಗಿದೆ. ಬೇಟೆಯ ಯುಗ, ಪಶುಪಾಲನೆಯ ಯುಗ ಹಾಗೂ ಕೃಷಿಯುಗಗಳನ್ನು ದಾಟಿದ ಅನಂತರ ಮಾನವ ಕೈಗಾರಿಕೆಯನ್ನು ವ್ಯಾಪಕವಾಗಿ ಅವಲಂಬಿಸಿ ಕೈಗಾರಿಕಾಯುಗದಲ್ಲಿ ಕಾಲಿಟ್ಟ. ಬೇಟೆ ಅಥವಾ ಕೃಷಿ ಕಾರ್ಯಗಳಿಗೆ ಬೇಕಾಗುವ ಸಲಕರಣೆಗಳನ್ನು ಮಾನವ ತಯಾರಿಸಿಕೊಳ್ಳಲು ಉದ್ಯುಕ್ತನಾದಾಗಲೇ ಅವನು ಕೈಗಾರಿಕೆಯಲ್ಲೂ ತೊಡಗಿದನಾದರೂ ಆಗ ಅವನಿಗೆ ಅದೇ ಪ್ರಧಾನ ಉದ್ಯಮವಾಗಿರಲಿಲ್ಲ. ಕೈಗಾರಿಕೆಯ ಅಂದಿನ ಸ್ಥಿತಿಗೂ ಇಂದಿನದಕ್ಕೂ ಬಹಳ ಅಂತರವಿದೆ. ಇಂದಿನ ಕೈಗಾರಿಕೆಯ ಹಲವು ಲಕ್ಷಣಗಳನ್ನು ಗಮನಿಸಿದಾಗ ಇದರ ವ್ಯಾಪ್ತಿಯೇನೆಂಬುದು ತಿಳಿದುಬರುತ್ತದೆ.

ಮೂಲವಸ್ತುಗಳನ್ನು ಉಪಯೋಗಿಸಿಕೊಂಡು ಪದಾರ್ಥಗಳನ್ನು ತಯಾರಿಸುವುದು ಕೈಗಾರಿಕೆಯ ಉದ್ದೇಶವಾದ್ದರಿಂದ ಇದು ದ್ವಿತೀಯಕ ಹಂತವೆನಿಸುತ್ತದೆ. ಇಲ್ಲಿ ಪದಾರ್ಥಗಳನ್ನು ಮೂಲತಃ ವಿನಿಮಯ ಮಾಡುವ ದೃಷ್ಟಿಯಿಂದ ಉತ್ಪಾದಿಸಲಾಗುವುದೇ ಹೊರತು ಕೃಷಿ ಉದ್ಯಮದಂತೆ ಅನುಭೋಗಕ್ಕಲ್ಲ. ಸಾಮಾನ್ಯವಾಗಿ ಪದಾರ್ಥಗಳಿಗೆ ಬೇಡಿಕೆಯನ್ನು ನಿರೀಕ್ಷಿಸಿ ದೂರದ ಇಲ್ಲವೆ ಭವಿಷ್ಯದ ಮಾರುಕಟ್ಟೆಗಾಗಿ ಅವನ್ನು ಉತ್ಪಾದಿಸಲಾಗುತ್ತದೆ. ಆದರೆ ಈ ನಿರೀಕ್ಷೆ ತಪ್ಪಾದ ಪಕ್ಷದಲ್ಲಿ ಉದ್ಯಮಿ ನಷ್ಟವನ್ನು ಹೊರಲು ಸಿದ್ಧನಾಗಿರಬೇಕು. ಉತ್ಪಾದನೆಗೆ ಪ್ರೇರಣೆ ಸಾಮಾನ್ಯವಾಗಿ ಲಾಭಗಳಿಕೆ. ಈ ಕಾರಣದಿಂದ ಉದ್ಯಮಿಗಳಲ್ಲಿ ಸ್ಪರ್ಧೆ ಸಂಭವಿಸುತ್ತದೆ. ಸ್ಪರ್ಧೆಯಿರುವ ಕಾರಣದಿಂದಲೂ ತಮ್ಮ ವಸ್ತುಗಳಿಗೆ ಮಾರುಕಟ್ಟೆಯನ್ನು ನಿಶ್ಚಿತಪಡಿಸಿಕೊಳ್ಳುವ ದೃಷ್ಟಿಯಿಂದಲೂ ಉದ್ಯಮಿಗಳು ಜಾಹೀರಾತನ್ನು ಕೈಗೊಳ್ಳುವುದುಂಟು. ಸ್ಪರ್ಧೆಯನ್ನು ತೊಡೆಯುವ ದೃಷ್ಟಿಯಿಂದ ಉದ್ಯಮಕೂಟಗಳನ್ನು ಸೃಷ್ಟಿಕೊಳ್ಳುವುದೂ ಉಂಟು.

ವಿನಿಮಯದ ದೃಷ್ಟಿಯಿಂದಲೇ ಮತ್ತು ದೂರದ ಮಾರುಕಟ್ಟೆಗಳಿಗಾಗಿ ಸರಕು ಉತ್ಪಾದನೆಯಾಗುವುದರಿಂದ ಭೂರಿ ಉತ್ಪಾದನೆ ಇದರ ಮುಖ್ಯ ಲಕ್ಷಣ. ಕೈಗಾರಿಕೆಯ ಬೃಹದ್ಗಾತ್ರದಿಂದಾಗಿ ಸ್ವಾಭಾವಿಕವಾಗಿ ಶ್ರಮ, ಬಂಡವಾಳ ಇವನ್ನು ಅಧಿಕ ಪ್ರಮಾಣದಲ್ಲಿಯೇ ಬಳಸಲಾಗುವುದು. ಯಂತ್ರಗಳನ್ನೂ ಆಧುನಿಕ ಉತ್ಪಾದನ ಕ್ರಮಗಳನ್ನೂ ಅಧಿಕವಾಗಿ ಬಳಸಲಾಗುವುದು. ಆಧುನಿಕ ಉತ್ಪಾದನ ವ್ಯವಸ್ಥೆಯ ಇನ್ನೊಂದು ಮುಖ್ಯ ಅಂಶವೆಂದರೆ ಶ್ರಮವಿಭಜನೆ. ಉತ್ಪಾದನಕಾರ್ಯವನ್ನು ಅನೇಕ ಭಾಗಗಳನ್ನಾಗಿ ವಿಭಜಿಸಿ ಪ್ರತಿಭಾಗವನ್ನೂ ಅನೇಕ ಉಪಭಾಗಗಳನ್ನಾಗಿ ವಿಂಗಡಿಸಿ ಒಂದೊಂದು ಉಪಭಾಗವನ್ನೂ ದಕ್ಷನಾದ ಒಬ್ಬ ಅಥವಾ ಅನೇಕ ಕಾರ್ಮಿಕರಿಗೆ ವಹಿಸಿಕೊಡಲಾಗುತ್ತದೆ. ಕೈಗಾರಿಕೆಯಲ್ಲಿ ಕಾರ್ಮಿಕರನ್ನು ಅಧಿಕ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗುವುದರಿಂದ ಕಾರ್ಮಿಕರಿಗೂ ಉದ್ಯಮಿಗಳಿಗೂ ನೇರ ಸಂಪರ್ಕವಿಟ್ಟುಕೊಳ್ಳುವ ಅನುಕೂಲವಿಲ್ಲದಂತಾಗಿ ತಪ್ಪು ತಿಳಿವಳಿಕೆಗೆ ಅವಕಾಶವುಂಟಾಗುತ್ತದೆ. ಅಲ್ಲದೆ ಕೈಗಾರಿಕೆಯೊಡೆಯರ ಮತ್ತು ಕಾರ್ಮಿಕರ ಹಿತಗಳು ಸ್ಪರ್ಧಾತ್ಮಕವಾಗಿ ಪರಿಣಮಿಸಿ, ಇದರಿಂದ ವಿವಾದಗಳು ಉದ್ಭವಿಸುವುದುಂಟು. ಕಾರ್ಮಿಕರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಕಾರ್ಮಿಕ ಸಂಘಗಳನ್ನು ರಚಿಸಿಕೊಂಡಿರುತ್ತಾರೆ.								(ಎಬಿ.ಎ.;ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ